ಗ್ರೀಗ್, ನಾರ್‍ಡಾಲ್ ಬ್ರನ್

 	1902-1943. ನಾರ್ವೆಯ ನಾಟಕಕಾರ, ಕಾದಂಬರಿಕಾರ, ಕವಿ ಮತ್ತು ದೇಶಭಕ್ತ. ಹುಟ್ಟಿದ್ದು ಬರ್ಗೆನ್‍ನಲ್ಲಿ ಆಸ್ಲೊ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿ ಇಂಗ್ಲಿಷ್ ಸಾಹಿತ್ಯದಲ್ಲಿ ವಿಶೇಷ ಪರಿಶ್ರಮ ಪಡೆದ. 10ನೆಯ ವಯಸ್ಸಿನಲ್ಲಿ ಸಾಧಾರಣ ನಾವಿಕನಾಗಿ ಸಮುದ್ರ ಸಂಚಾರ ಮಾಡಿದನಲ್ಲದೆ ಪತ್ರಿಕೋದ್ಯಮಿಯಾಗಿಯೂ ದೇಶ ವಿದೇಶಗಳಲ್ಲಿ ಸಂಚರಿಸಿದ. ಈತನ ಕೃತಿಗಳಲ್ಲಿ ಪ್ರಧಾನವಾಗಿ ಕಾಣುವುದು ಸಾಹಸದ ಗೀಳು. ಶ್ರೀಸಾಮಾನ್ಯನ ಬಗ್ಗೆ ಆಸಕ್ತಿ ಮತ್ತು ದೇಶಭಕ್ತಿ. ಈತನ ಶೈಲಿ ಭಾವಗೀತಮಯವಾದುದು. ರೌಂಡ್ ದಿ ಕೇಪ್ ಆಫ್ ಗುಡ್ ಹೋಪ್ (1922) ಈತನ ಮೊದಲ ಕವನ ಸಂಕಲನ. ಸ್ಟೋನ್ಸ್ ಇನ್ ದಿ ಸ್ಟ್ರೀಮ್ (1925). ನಾರ್ವೆ ಇನ್ ಅವರ್ ಹಾಟ್ರ್ಸ್ (1929)-ಈತನ ಇತರ ಕವನ ಸಂಕಲನಗಳು. ಈತನ ಪರ್ಯಟನಾಕಾಂಕ್ಷೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಇದ್ದ ಪ್ರಬಲ ಉತ್ಸಾಹಗಳನ್ನು ಈ ಸಂಕಲನಗಳಲ್ಲಿ ಗುರುತಿಸಬಹುದು. ದಿ ಷಿಪ್ ಸೇಲ್ಸ್ ಆನ್ (1927) ಈತನ ಮೊದಲ ಕಾದಂಬರಿ. ಈತನ ಗಾಢ ಸಾಮಾಜಿಕ ಪ್ರಜ್ಞೆಗೆ ಇದು ಉದಾಹರಣೆಯಾಗಿದೆ. ಕೀಟ್ಸ್, ಷೆಲ್ಲಿ, ಬೈರನ್, ರೂಪರ್ಟ್ ಬ್ರೂಕ್, ಸಿ.ಎಚ್. ಸೋರ್ಲೆ, ವಿಲ್‍ಫ್ರೆಡ್ ಓವೆನ್ ಮೊದಲಾದವರನ್ನು ಕುರಿತ ಆತ್ಮೀಯ ಪ್ರಬಂಧಗಳನ್ನು ಈತ ದಿ ಯಂಗ್ ಡೆಡ್ ಒನ್ಸ್ ಎಂಬ ಗ್ರಂಥವಾಗಿ ಪ್ರಕಟಿಸಿದ್ದಾನೆ.

  	ಎರಡು ವರ್ಷಗಳ ಮಾಸ್ಕೋವಾಸ ಈತನ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಿತು. ಈತನ ಸಾಮಾಜಿಕ ಪ್ರಜ್ಞೆ ಕಮ್ಯೂನಿಸಮ್ ಕಡೆ ವಾಲಿತು. ಕಾರ್ಮಿಕ ವರ್ಗದ ಬಗ್ಗೆ ಈತನಿಗಿದ್ದ ಸಹಾನುಭೂತಿ ಇನ್ನಷ್ಟು ಹೆಚ್ಚಿತು. ಸೋವಿಯತ್ ರಂಗಭೂಮಿಯಿಂದಲೂ ಪ್ರಭಾವಿತನಾಗಿ, ಸಾಮಾಜಿಕ ಸಮಸ್ಯೆಗಳನ್ನು ವಸ್ತುವನ್ನಾಗಿ ಮಾಡಿಕೊಂಡು ಹೊಸ ತಂತ್ರಗಳನ್ನು ಬಳಸಿ ಈತ ನಾಟಕಗಳನ್ನು ಬರೆದ. ಅವು ಮುಖ್ಯವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅನ್ಯಾಯಗಳನ್ನು ನಿಷ್ಠುರವಾಗಿ ಖಂಡಿಸುತ್ತವೆ, ವಿಡಂಬಿಸುತ್ತವೆ. ಈತ ಬರೆದ ಒಟ್ಟು ಆರು ನಾಟಕಗಳಲ್ಲಿ ಅವರ್ ಆನರ್ ಅಂಡ್ ಅವರ್ ಪವರ್ (1935) ಮತ್ತು ದಿ ಡಿಫೀಟ್ (1937) ಪ್ರಮುಖವಾದವು. ಮೊದಲ ನಾಟಕದಲ್ಲಿ ಒಂದನೆಯ ಮಹಾಯುದ್ಧ ಕಾಲದ ನಾರ್ವೆಯ ಹಡಗುಗಳ ನಾಯಕರ ದುರಾಶೆಯ ಖಂಡನೆ ಇದೆ. ಎರಡನೆಯ ನಾಟಕದಲ್ಲಿ 1871 ರ ಪ್ಯಾರಿಸ್ ಕಮ್ಯೂನಿನ ದುರಂತ ಚಿತ್ರಣವಿದೆ.

  	1940ರಲ್ಲಿ ಜರ್ಮನರು ನಾರ್ವೆಯನ್ನು ಆಕ್ರಮಿಸಿಕೊಂಡಾಗ ಗ್ರೀಗ್ ಇಗ್ಲೆಂಡಿಗೆ ಪಲಾಯನಮಾಡಿದ. ಅಲ್ಲಿಂದ ಈತ ಪ್ರಸಾರ ಮಾಡಿದ ಕಾವ್ಯ ಆಕ್ರಮಣಕಾರ ರಾಷ್ಟ್ರದ ವಿರುದ್ಧ ನಾರ್ವೇ ಜನರ ಪ್ರತಿಭಟನೆಯನ್ನು ಜಾಗೃತಗೊಳಿಸಿತು. ಈತ ತನ್ನ ಯುದ್ಧಗೀತೆಗಳಲ್ಲಿ ನಾರ್ವೆಯ ಬಗ್ಗೆ ತೀವ್ರ ಆಸಕ್ತಿಯನ್ನೂ ಶಾಂತಿಯ ಜರ್ಝರಿತ ಮೌಲ್ಯಗಳನ್ನು ವ್ಯಕ್ತಪಡಿಸುತ್ತ ನಾವು ಕೊಲ್ಲುತ್ತೇವೆ. ನಮ್ಮ ಮಕ್ಕಳು ನಮ್ಮಂತಾಗದಿರಲೆಂದು- ಎಂದು ಭಾವಪೂರ್ಣವಾಗಿ ಹೇಳಿದ್ದಾನೆ. 1943ರ ಡಿಸೆಂಬರ್ 2 ರಂದು ನಡೆದ ವಿಮಾನ ದಾಳಿಯಲ್ಲಿ ಗ್ರೀಗ್ ಸಾವಿಗೀಡಾದ.								(ಎಸ್.ವಿ.ಎಸ್.ಯು.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ